ಜೇಮ್ಸ್, ಹೆನ್ರಿ
	1843-1916. ಅಮೆರಿಕದ ಬಹುದೊಡ್ಡ ಕಾದಂಬರಿಕಾರರಲ್ಲೊಬ್ಬ. ವಿಮರ್ಶಕ, ಆಧುನಿಕ ಕಾದಂಬರಿಗೆ ಶಾಸ್ತ್ರೀಯ ಅಸ್ತಿವಾರವನ್ನು ಹಾಕಿದವ; ಕಾದಂಬರಿಯ ನವಮನ್ವಂತರವನ್ನು ಆರಂಭಿಸಿದ ದ್ರಷ್ಟಾರ. ವಿಶ್ವಮಾನವ ದೃಷ್ಟಿಯ ಕಾದಂಬರಿ ಮಾತ್ರವಲ್ಲ ಮನೋವೈe್ಞÁನಿಕ ಕಾದಂಬರಿಯೂ ಈತನ ಮಹತ್ತರವಾದ ಕಾಣಿಕೆ. ಕಥನಕಲೆಯಲ್ಲಿ ಬಳಸಬಹುದಾದ ಹಲವಾರು ತಂತ್ರಗಳನ್ನು ಪ್ರಯೋಗ ಮಾಡಿದುದಲ್ಲದೆ ಕಾದಂಬರಿ ಕಲೆಯ ಸೂತ್ರಗಳನ್ನು ಶೋಧಿಸಿ ಶಾಸ್ತ್ರೀಯವಾಗಿ ಮಂಡಿಸಿದ. ವಿಶ್ವವಿಖ್ಯಾತ ಇಂಗ್ಲಿಷ್ ಕಾದಂಬರಿಕಾರರಾದ ಜೋಸೆಫ್ ಕಾನ್ರಾಡ್, ಜೇಮ್ಸ್ ಜಾಯ್ಸ್, ವರ್ಜೀನ್ಯ ವುಲ್ಪ್, ಡೊರೊತಿ ರಿಚರ್ಡ್‍ಸನ್, ಗ್ರೇಹಂ ಗ್ರೀನ್ ಮುಂತಾದವರು ಒಂದಲ್ಲ ಒಂದು ರೀತಿಯಲ್ಲಿ ಇವನಿಂದ ಪ್ರಭಾವಿತರಾದವರೇ. ಈತ ತನ್ನ ಕಾದಂಬರಿಗಳಿಗೆ ಬರೆದ ಮುನ್ನುಡಿಗಳ ಸಂಗ್ರಹವೇ ಸಾಕು, ಆಧುನಿಕ ಕಾದಂಬರೀ ಸಾಹಿತ್ಯದ ವಿಮರ್ಶಾಶಾಸ್ತ್ರಗ್ರಂಥವಾಗುತ್ತದೆ. ಇಂದು ವಿಮರ್ಶಕರು ಬಳಸುವ ಹಲವಾರು ಪಾರಿಭಾಷಿಕ ಪದಗಳೆಲ್ಲ ಈ ಸಂಗ್ರಹದಿಂದಲೇ ಬಂದಿವೆ. 			(ಎನ್.ಎಸ್.ಎಲ್.)

	ಈತ ಹುಟ್ಟಿದ್ದು ನ್ಯೂ ಯಾರ್ಕಿನಲ್ಲಿ, ತಂದೆ, ಹಿರಿಯ ಹೆನ್ರಿ ಜೇಮ್ಸ್ ವಿಶಿಷ್ಟ ರೀತಿಯ ವ್ಯಕ್ತಿ. ಸ್ವೀಡನ್‍ಬೋರ್ಗ್ ಪಂಥದ ಅನುಯಾಯಿ. ಬುದ್ಧಿ ಚಾತುರ್ಯದಲ್ಲಿ. ಶಬ್ದ ಸಂಪತ್ತಿಯಲ್ಲಿ, ಮಾತುಗಾರಿಕೆಯಲ್ಲಿ ಅಸಾಧಾರಣನಾದವ. ಕಿರಿಯ ಹೆನ್ರಿ ಜೇಮ್ಸನ ಅಣ್ಣ, ವಿಲಿಯಂ ಜೇಮ್ಸ್, ಹೆಸರಾಂತ ಮನೋವಿe್ಞÁನಿ, ತತ್ತ್ವಶಾಸ್ತ್ರಜ್ಞ. ಇಬ್ಬರು ಮಕ್ಕಳೂ ತಂದೆಗೆ ಕೀರ್ತಿ ತಂದವರು. ಕಿರಿಯ ಹೆನ್ರಿ ನ್ಯೂ ಯಾರ್ಕಿನ ಅಲ್ಬೆನಿಯಲ್ಲಿದ್ದ ಶ್ರೀಮಂತ ತಾತನ ಮನೆಯಲ್ಲಿ ಬಾಲ್ಯವನ್ನು ಕಳೆದ. ಅನಂಥರ ತಂದೆತಾಯಿಯರೊಂದಿಗೆ ಯೂರೋಪಿನಲ್ಲಿ ನೆಲೆಸಿ ಮನೆಯಲ್ಲೇ ಖಾಸಗಿಯಾಗಿ ಶಿಕ್ಷಣ ಪಡೆದ. ಕ್ರಮಬದ್ಧವಾದ ಶಿಕ್ಷಣ ಮಾತ್ರ ಈತನಿಗೆ ಯಾವಾಗಲೂ ದೊರೆಯಲಿಲ್ಲ. ತುಂಬ ಸಂಕೋಚಪ್ರಕೃತಿ. ನಾಚಿಕೆಯ ಸ್ವಭಾವ ಈತನದು. ಈತನ ಓದುವ ಗೀಳನ್ನು ನೋಡಿ ಗ್ರಂಥಭಂಡಾರವನ್ನೇ ನುಂಗಿ ಹಾಕುತ್ತಾನೆ ಎಂದು ಎಲ್ಲರೂ ತಮಾಷೆಮಾಡುತ್ತಿದ್ದರು. ಈತ ಓದುತ್ತಿದ್ದುದೆಲ್ಲ ಕತೆ ಕಾದಂಬರಿಗಳೇ

	17ನೆಯ ವಯಸ್ಸಿನಲ್ಲಿ ಈತನಿಗೆ ಲಾ ಫಾರ್ಜ್ ಎಂಬ ಚಿತ್ರಕಲಾವಿದನ ಸ್ನೇಹವಾಯಿತು. ಆತನ ಪ್ರೋತ್ಸಾಹದಿಂದ ಕತೆಗಳನ್ನು ಬರೆಯತೊಡಗಿದ. ಎ ಟ್ರ್ಯಾಜಿಡಿ ಆಫ್ ಎರರ್ ಎಂಬುದೇ ಕಾಂಟಿನೆಂಟಲ್ ಮಾಸಿಕದಲ್ಲಿ ಪ್ರಕಟವಾದ ಮೊದಲ ಕತೆ. ಕೇವಲ 25ನೆಯ ವಯಸ್ಸಿಗೆ ಅಮೆರಿಕದ ಅತ್ಯುತ್ತಮ ಕತೆಗಾರ ಎಂಬ ಕೀರ್ತಿಯನ್ನು ಸಂಪಾದಿಸಿದ. ಅಟ್ಲಾಂಟಿಕ್ ಪತ್ರಿಕೆಯ ಪುಟಗಳು ಜೇಮ್ಸನ ಕತೆಗಳಿಗೂ ಪುಸ್ತಕ ವಿಮರ್ಶೆಗಳಿಗೂ ಮೀಸಲಾಗಿದ್ದವು. ಅದರ ಸಂಪಾದಕ ವಿಲಿಯಂ ಡೀನ್ ಹಾವೆಲ್ಸ್ ಮತ್ತು ಜೇಮ್ಸ್ - ಈ ಇಬ್ಬರೂ ವಾಸ್ತವತೆಯ ಯುಗವನ್ನಾರಂಭಿಸಿದರೆಂದು ಹೇಳಲಾಗಿದೆ.

	ಹೆನ್ರಿ ಜೆಮ್ಸ್‍ನ ಸುಮಾರು ಐವತ್ತು ವರ್ಷಗಳ ಸಾಹಿತ್ಯ ಜೀವನ ಕಾಲವನ್ನು ಮೂರು ಭಾಗಗಳಾಗಿ ಹೆಸರಿಸಬಹುದು. ಜೇಮ್ಸನದು ಅಸ್ಖಲಿತವಾದ ಶೈಲಿ. ಕುತೂಹಲವನ್ನು ಕೆರಳಿಸಿ ಆಕರ್ಷಿಸುವ ಕತೆಗಾರಿಕೆ. ಮೊದಲಿನಿಂದ ಕಡೆಯವರೆಗೂ ಈತನ ಕತೆಗಳ ಶ್ರೇಷ್ಠವಾದ ಗುಣಮಟ್ಟವಾಗಲೀ ಪ್ರಯೋಗಶೀಲತೆಯ ಉತ್ಸಾಹವಾಗಲೀ ಎಂದೂ ತಗ್ಗಲಿಲ್ಲ.

	ಮೊದಲ ಭಾಗದ ಕಾದಂಬರಿಗಳ ವಸ್ತು ಸಾಮಾನ್ಯವಾಗಿ ಐರೋಪ್ಯ ಜೀವನ ಸಂಸ್ಕøತಿಗಳ ಮೇಲೆ ಅಮೆರಿಕ ಬೀರಿದ ಪ್ರಭಾವ. ರಾಡ್ರಿಕ್ ಹಡ್ಸನ್ (1875) ಈ ಸರಣಿಯಲ್ಲಿ ಬಂದ ಮೊದಲ ಯಶಸ್ವೀ ಕಾದಂಬರಿ. ಅಮೆರಿಕದ ಶಿಲ್ಪ ಕಲಾವಿದನೊಬ್ಬನ ಜೀವನವನ್ನು ಕುರಿತ ಇಲ್ಲಿನ ಕತೆಯಲ್ಲಿ ಬಾಳಿನ ಗತಿಯನ್ನು ನಿರ್ಧರಿಸುವುದು ದೇಶ ಹಾಗೂ ಪರಿಸರವೊ ಇಲ್ಲವೆ ಸೃಜನಶೀಲವಾದ ವ್ಯಕ್ತಿತ್ವವೊ ಎಂಬ ಸಮಸ್ಯೆಯನ್ನು ಬಿಡಿಸಲಾಗಿದೆ.

	ದಿ ಅಮೆರಿಕನ್ (1877) ಎಂಬ ಮತ್ತೊಂದು ಕಾದಂಬರಿಯಿಂದ ಈತನ ಕೀರ್ತಿ ಇನ್ನೂ ವ್ಯಾಪಕವಾಗಿ ಹರಡಿತು. ಡೇಸಿ ಮಿಲ್ಲರ್ (1879). ದಿ ಪ್ರೋಟ್ರ್ರೇಟ್ ಆಫ್ ಎ ಲೇಡಿ (1881) ಎಂಬೆರಡು ಕಾದಂಬರಿಗಳಂತೂ ಕರ್ತೃವಿಗೆ ಜಗದ್ವಿಖ್ಯಾತಿಯನ್ನೇ ತಂದವು. ಅಮೆರಿಕದ ಮುಗ್ದತೆ ಯೂರೋಪಿನ ನಾಗರಿಕತೆಯ ಥಳುಕಿನ ಹಿನ್ನೆಲೆಯಲ್ಲಿ ಎದ್ದು ಕಾಣುವಂತೆ ಈ ಕೃತಿಗಳಲ್ಲಿ ಮಾಡಿಸಿರುವುದು ಜೇಮ್ಸನ ಸ್ವದೇಶಾಭಿಮಾನವನ್ನು ಸೂಚಿಸುತ್ತದೆ. ಅತಿಯಾದ ನಯ, ನಾಜೂಕು ಧೂರ್ತತೆಯ ಲಕ್ಷಣ ನಯ, ನೀತಿ, ಕುಶಲತೆಗಳಿಗಿಂತ ಮಾನವೀಯ ಮೌಲ್ಯಗಳು ಮುಖ್ಯ ಎಂಬೀ ವಿಚಾರಗಳನ್ನು ಅನೇಕ ಪಾತ್ರಗಳ ಚಿತ್ರಣದಲ್ಲಿ ಕಾದಂಬರಿಕಾರ ಸೂಚಿಸುತ್ತಾನೆ.

	ದಿ ಬಾಸ್ಟೀನಿಯನ್ಸ್ (1886) ಎಂಬ ಕಾದಂಬರಿ ಎರಡನೆಯ ಕಾಲಾವಧಿಯ ಪ್ರಾರಂಭದ ಕೃತಿ. ದಿ ಪ್ರಿನ್ಸೆಸ್ ಕ್ಯಾಸಮ್ಯಾಸಿಮ (1886), ದಿ ಟ್ರ್ಯಾಜಿಕ್ ಮ್ಯೂಸ್ (1889)-ಈ ಅವಧಿಯ ಮುಖ್ಯ ಕೃತಿಗಳು.

	1890-95ರ ಅವಧಿಯಲ್ಲಿ ನಾಟಕಗಳನ್ನು ಬರೆದು ಪ್ರದರ್ಶಿಸುವ ಪ್ರಯತ್ನಕ್ಕೆ ಕೈಹಾಕಿ ವಿಫಲನಾಗಿ ಜೇಮ್ಸ್ ಮತ್ತೆ ಕಾದಂಬರಿಗೇ ಹಿಂತಿರುಗಿದ. ಈ ಕಾಲದಲ್ಲಿ ದಿ ಅದರ್ ಹೌಸ್ (1896), ದಿ ಸ್ಪಾಯಿಲ್ಸ್ ಆಫ್ ಪಾಯಿಂಟನ್ (1897), ಇನ್ ದಿ ಕೇಜ್ (1898), ದಿ ಆಕ್ವರ್ಡ್ ಏಜ್ (1899) ಮೊದಲಾದ ಕಾದಂಬರಿಗಳು ಬಂದವು. ಕಿರುಕಾದಂಬರಿಗಳ ಸರಣಿಯೂ ಈ ಕಾಲದಲ್ಲೇ ಮೊದಲಾಯಿತು. ಇವೆಲ್ಲವೂ ಇಂಗ್ಲಿಷ್ ಜೀವನಕ್ಕೆ ಸಂಬಂಧಿಸಿದವು. ಅತ್ಯಂತ ಪ್ರಸಿದ್ಧವಾದ ದಿ ಟರ್ನ್. ಆಫ್ ದಿ ಸ್ಕ್ರೂ ಎಂಬ ಕತೆಯನ್ನು ಈತ ಬರೆದದ್ದೂ ಇದೇ ಕಾಲದಲ್ಲಿಯೇ. 
ಮೂರನೆಯ ಭಾಗದಲ್ಲಿ ಅಮೆರಿಕ ಮತ್ತು ಯೂರೋಪು ದೇಶಗಳ ಸ್ವಭಾವ ಭಿನ್ನತೆಯ ಸೂಕ್ಷ್ಮ ಅವಲೋಕನದ ಕಾದಂಬರಿಗಳು ಹೊರಬಂದವು. ಪದರಪದರವಾಗಿ ಬಿಡಿಸಿದ, ಪಾತ್ರಗಳ ಮನೋವಿಶ್ಲೇಷಣಾತ್ಮಕ ಚಿತ್ರಣವನ್ನು ಇಲ್ಲಿ ಕಾಣಬಹುದು. ನಡೆದ ಕತೆಗಿಂತ ಮನೋವಿಶ್ಲೇಷಣೆಯೇ ಹೆಚ್ಚಾಗಿದ್ದುದರಿಂದ ಜೇಮ್ಸನ ಕತೆಗಳಲ್ಲಿ ಎಂದೂ ಯಾವ ಘಟನೆಯೂ ಜರುಗುವುದಿಲ್ಲ ಎಂಬ ಟೀಕೆ ವಿಮರ್ಶಕರಿಂದ ಬಂತು.

	ತಂತ್ರಸಿದ್ಧಿಯಲ್ಲಿ, ಬಾಳಿನ ದುರಂತದಲ್ಲಿ ಗಂಭೀರಾರ್ಥವನ್ನು ಕಾಣುವ ಮನೋಭಾವದಲ್ಲಿ ದಿ ಅಂಬ್ಯಾಸಿಡರ್ಸ್ (1903), ದಿ ವಿಂಗ್ಸ್ ಆಫ್ ದಿ ಡೋವ್ (1904), ದಿ ಗೋಲ್ಡನ್ ಬೌಲ್ (1904) ಎಂಬ ಬೃಹತ್ ಕಾದಂಬರಿಗಳು ಕಲಾಸಿದ್ಧಿಯ ಶಿಖರವನ್ನೇ ಮುಟ್ಟಿದವು.

	ಆರಂಭಕಾಲದಲ್ಲಿ ಜೇಮ್ಸ್‍ನ ಕಾದಂಬರಿಗಳ ಮೇಲೆ ಬಾಲ್ಜಾಕ್, ಮೆರಿಮೀ, ಜಾರ್ಜ್ ಎಲಿಯಟ್, ಜಾರ್ಜ್ ಸ್ಯಾಂಡ್ ಮತ್ತು ನ್ಯಾತ್ಯಾನಿಯಲ್ ಹಾತಾರ್ನ್ ಇವರ ಕೃತಿಗಳ ಪ್ರಭಾವ ಕಾಣುತ್ತದೆ.

	ಕಾದಂಬರಿ ಕಲೆಯ ಬಗೆಗೆ ಮೊದಲಿನಿಂದಲೂ ಸ್ವತಂತ್ರ ಚಿಂತನದಲ್ಲಿ ತೊಡಗಿದ್ದ ಜೇಮ್ಸನಿಗೆ ಬೇರೆ ಯಾರಿಗೂ ಕಾಣದಿದ್ದ ಕೆಲವು ಸಮಸ್ಯೆಗಳು ಗೋಚರವಾದವು. ಕಾದಂಬರಿ ಸಾಧಿಸಬೇಕೆನ್ನುವ ಧ್ಯೇಯ, ಕಾದಂಬರಿಕಾರನ ಜೀವನ ದೃಷ್ಟಿ-ಇವುಗಳ ಪ್ರಾಮುಖ್ಯವನ್ನು ಜೇಮ್ಸ್ ಪ್ರತಿಪಾದಿಸಿದ. ಕತೆಯ ಉದ್ದೇಶದಲ್ಲಿ ಓದುಗನಿಗೆ ತೀವ್ರವಾದ ಕಳಕಳಿ ಉಂಟಾಗುವಂತೆ ಕತೆ ಹೇಳುವ ಜಾಣ ವಿಧಾನವನ್ನು ಗೊತ್ತುಮಾಡಿದ. ಮಾನವಸಹಜವಾದ ಸ್ವಭಾವ, ನಡೆವಳಿಕೆಗಳ ವೈವಿಧ್ಯವನ್ನು ಚೆನ್ನಾಗಿ ಅವಲೋಕಿಸಿ ತಿಳಿದಿದ್ದ ಈತ ಪಾತ್ರನಿರ್ಮಿತಿಯಲ್ಲಿ ವಿಶೇಷ ಪರಿಣತಿಯನ್ನು ತೋರಿಸಿದೆ.

	ತನ್ನ ಮೆಚ್ಚಿನ ರಷ್ಯನ್ ಕಾದಂಬರಿಕಾರ ಐವನ್ ಟರ್ಗೆನ್ಯಫನ ಸ್ನೇಹವನ್ನು ಜೇಮ್ಸ್ ಯೂರೋಪಿನಲ್ಲಿದ್ದಾಗ ಸಂಪಾದಿಸಿದ. ಕತೆಯಲ್ಲಿ ಘಟನೆಗಳಿಗಿಂತ ಪಾತ್ರಗಳು ಮುಖ್ಯ ಎಂಬ ಟರ್ಗೆನ್ಯಘನ ಅಭಿಪ್ರಾಯ ಈತನಿಗೆ ತುಂಬ ಹಿಡಿಸಿತು, ಫೆಂಚ್ ವಾಸ್ತವವಾದಿಗಳಾದ ಪ್ಲೊಬಾರ್, ಜೆóೂೀಲ ಮೊದಲಾದವರೊಂದಿಗೆ ಕಾದಂಬರಿಯ ಕಲೆ, ತಂತ್ರಗಳನ್ನು ಕುರಿತು ಚರ್ಚೆಮಾಡುತ್ತಿದ್ದ. ಈತ ಅವರ ಕೆಲವು ಅಭಿಪ್ರಾಯಗಳನ್ನು ಮೆಚ್ಚಿ ಸ್ವೀಕರಿಸಿದರೂ ಪ್ರಾಂತೀಯ ದುರಭಿಮಾನವನ್ನೂ ಕವಿತೆಗಳಲ್ಲಿ ಅಶ್ಲೀಲತೆಯನ್ನು ಬೆರೆಸುವುದನ್ನೂ ಒಪ್ಪಲಿಲ್ಲ.

	ತನ್ನ ಮನಸ್ಸನ್ನು ಬಹುವಾಗಿ ಆಕರ್ಷಿಸಿದ್ದ ಹತ್ತಿರದ ನೆಂಟರ ಹುಡುಗಿ ಮಿನ್ನಿ ಟೆಂಪಲ್ ಅಕಾಲಮರಣಕ್ಕೆ ಒಳಗಾದಾಗ ಒದಗಿದ ದುಃಖ ಜೇಮ್ಸನ ಮೇಲೆ ಗಾಢವಾದ ಪರಿಣಾಮವನ್ನುಂಟುಮಾಡಿತು. ದಿ ಪೋಟ್ರ್ರೇಟ್ ಆಫ್ ಎ ಲೇಡಿ, ದಿ ವಿಂಗ್ಸ್ ಆಫ್ ದಿ ಡೋವ್ ಮತ್ತು ಕೆಲವು ಸಣ್ಣಕತೆಗಳಲ್ಲಿ ಈಕೆಯ ಪಾತ್ರವನ್ನು ಜೇಮ್ಸ್ ಚಿತ್ರಿಸಿದ್ದಾನೆ. ಪ್ರವಾಸಾನುಭವಗಳ ಮೇಲೆಯೂ ಕೆಲವು ಕಾದಂಬರಿಗಳನ್ನು (ಎ ಫ್ಯಾಷನಬಲ್ ಪಿಲಿಗ್ರಿಮ್ ಎಂಬ ಕತೆ, ಅಟ್ಲಾಂಟಿಕ್ ಮಾಸಿಕದಲ್ಲಿ ಧಾರಾವಾಹಿಯಾಗಿ ಬಂದ ವಾಚ್ ಅಂಡ್ ವಾರ್ಡ್ ಮತ್ತು ದಿ ಅಮೆರಿಕನ್ ಸೀನ್) ಬರೆದಿದ್ದಾನೆ. ಇವಲ್ಲದೆ ಟ್ರಾನ್ಸ್ ಅಟ್ಲಾಂಟಿಕ್ ಸ್ಕೆಚಸ್ (1875) ಪೋಟ್ರ್ರೇಟ್ಸ್ ಆಫ್ ಪ್ಲೇಸಸ್ (1883), ಎ ಲಿಟ್ಲ್ ಟೂರ್ ಇನ್ ಫ್ರಾನ್ಸ್ (1885). ಇಂಗ್ಲಿಷ್ ಅವರ್ಸ್ (1905), ಇಟಾಲಿಯನ್ ಅವರ್ಸ್ (1909) ಎಂಬ ಪ್ರವಾಸಕಥನಗಳನ್ನೂ ಈತ ಬರೆದ. 1910-14ರಲ್ಲಿ, ಎರಡು ಸಂಪುಟಗಳಲ್ಲಿ, ತಾರುಣ್ಯದವರೆಗಿನ ತನ್ನ ಆತ್ಮಕಥೆಯನ್ನು ಬರೆದ ಜೇಮ್ಸ್ ಮೂರನೆಯ ಸಂಪುಟದಲ್ಲಿ ತನ್ನ ಮಧ್ಯವಯಸ್ಸಿನ ಆತ್ಮಚರಿತ್ರೆಯನ್ನು ಬರೆಯಲು ಆರಂಭಿಸಿ ಅದು ಮುಗಿಸುವ ಮೊದಲೇ ಮರಣಹೊಂದಿದ.

	ಜೀವಿತದ ಕಡೆಯ 2 ವರ್ಷ ಜೇಮ್ಸ್ ತನ್ನೆಲ್ಲ ಕತೆ, ಕಾದಂಬರಿಗಳಲ್ಲೂ ಅತ್ಯುತ್ತಮವೆನಿಸುವ ಕೃತಿಗಳನ್ನು ಮಾತ್ರ ಆರಿಸಿ ಮತ್ತೆ ತಿದ್ದಿ, ಪರಿಷ್ಕರಿಸಿ ನ್ಯೂ ಯಾರ್ಕ್ ಆವೃತ್ತಿಗೆಂದು 24 ಸಂಪುಟಗಳಲ್ಲಿ ಸಿದ್ಧಪಡಿಸಿದ. ದಿ ಐವರಿ ಟವರ್ ಮತ್ತು ದಿ ಸೆನ್ಸ್ ಆಫ್ ದಿ ಪಾಸ್ಟ್ ಎಂಬೆರಡು ಕಾದಂಬರಿಗಳೂ ಆತ್ಮಕಥೆಯ ಮೂರನೆಯ ಭಾಗವೂ ಈತನ ಮರಣಕಾಲದಲ್ಲಿ ಅಪೂರ್ಣವಾಗಿ ಉಳಿದವು. 20 ಪೂರ್ಣಗಾತ್ರದ ಕಾದಂಬರಿಗಳು, 12 ಕಿರುಕಾದಂಬರಿಗಳು, ನೂರಕ್ಕೂ ಮೇಲ್ಪಟ್ಟು ಸಣ್ಣಕತೆಗಳು, 5 ಪ್ರವಾಸಕಥನಗಳು, 5 ವಿಮರ್ಶಾ ಲೇಖನಗಳ ಸಂಕಲನಗಳು-ಈತನ ವಿಪುಲವಾದ ಸಾಹಿತ್ಯರಚನೆಗೆ ಸಾಕ್ಷಿ.

	1905ರಲ್ಲಿ ಜೇಮ್ಸ್ ಅಮೆರಿಕದ ಕಲೆ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯನಾಗಿ ಚುನಾಯಿತನಾದ. 1915ರಲ್ಲಿ ಇಂಗ್ಲಂಡಿನಲ್ಲೇ ನೆಲಸಿ ಬ್ರಿಟಿಷ್ ಪೌರತ್ವವನ್ನು ಪಡೆದು ಜಾರ್ಜ್ ದೊರೆಯಿಂದ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿಯನ್ನು ಪಡೆದ.

	1916ರಲ್ಲಿ ಇಂಗ್ಲೆಂಡಿನಲ್ಲಿ ಮರಣ ಹೊಂದಿದ ಈತನ ಚಿತಾಭಸ್ಮವನ್ನು ಅಮೆರಿಕಕ್ಕೆ ಕೊಂಡೊಯ್ದು ಕೇಂಬ್ರಿಜ್ ಚರ್ಚ್ ಅಂಗಳದಲ್ಲಿ ಒಂದೆಡೆ ಇದ್ದ ಜೇಮ್ಸ್ ಮನೆತನದ ಹಿರಿಯರ ಸಮಾಧಿಗಳ ಪಕ್ಕದಲ್ಲೇ ಇಡಲಾಯಿತು.

	ಹೆನ್ರಿ ಜೇಮ್ಸ್ 20ನೆಯ ಶತಕದ ಬಹುದೊಡ್ಡ ಕತೆಗಾರ. ಕಾದಂಬರೀ ಕ್ಷೇತ್ರದಲ್ಲಿ ನೂತನ ಮಾರ್ಗಗಳ ಆದ್ಯನಿರ್ಮಾಪಕ. ಇಂದು ಕಾದಂಬರಿತಂತ್ರದಲ್ಲಿ ಬಹು ಪ್ರಚಲಿತವಾಗಿರುವ ಪ್ರe್ಞÁವಾಹಿ ವಿಧಾನವನ್ನು ಮೊದಲು ಬಳಕೆಗೆ ತಂದವ. ಸ್ವೋಪಜ್ಞತೆಯಲ್ಲಿ, ಉತ್ಕøಷ್ಟವಾದ ಕಥನಶೈಲಿಯಲ್ಲಿ, ಕಲ್ಪಕತೆಯಲ್ಲಿ ಹೆಸರಾದ ಈತನ ಕೃತಿಗಳು ಅಮೆರಿಕದ ಸಾಹಿತ್ಯದಲ್ಲಿ ಆದರ್ಶ ಮಾದರಿಗಳಾಗಿವೆ. ಒಂದು ಸೋಜಿಗದ ಸಂಗತಿ: ಇಷ್ಟೆಲ್ಲ ದೊಡ್ಡ ಕತೆಗಾರ ಎಂದು ಹೆಸರಾದರೂ ಈತನ ಜೀವಿತಕಾಲದಲ್ಲಿ ಈತನ ಕಾದಂಬರಿಗಳನ್ನು ಓದಿದವರ ಸಂಖ್ಯೆ ಬಹಳ ಕಡಿಮೆ. 1943ರಲ್ಲಿ ಈತನ ನೂರನೆಯ ಜನ್ಮದಿನೋತ್ಸವವನ್ನು ಆಚರಿಸಿದಾಗ ಮಾತ್ರ ಪ್ರಪಂಚದಾದ್ಯಂತ ಓದುಗರ ಆಸಕ್ತಿ ಬೆಳೆಯಿತು. ಕಾದಂಬರಿ, ಕತೆಗಳಿಗೆ ಪ್ರಾಶಸ್ತ್ಯ ದೊರಕಿತು.		
(ಕೆ.ಬಿ.ಪಿ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ